ಆಬರ್‍ಕ್ರಾಂಬಿ, ಲಾಸೆಲಸ್
	(1881-1938). ಆಂಗ್ಲಕವಿ, ವಿಮರ್ಶಕ. ಲೀಡ್ಸ್ ಮತ್ತು ಲಂಡನ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕನಾಗಿದ್ದ. ಕಾವ್ಯಕೃತಿಗಳಲ್ಲಿ ಮುಖ್ಯವಾದವು-ಪ್ರಥಮ ಕೃತಿಯಾದ ಇಂಟರ್‍ಲ್ಯೂಡ್ಸ್ ಅಂಡ್ ಅದರ್ ಪೊಯಮ್ಸ್ (1908) ಎಂಬ್ಲಮ್ಸ್ ಆಫ್ ಲವ್ (1912), ಡೆಬೋರಾ (1912). 1930ರಲ್ಲಿ ಹೊರಬಂದ ಆಕ್ಸ್‍ಫರ್ಡ್ ಪೊಯೆಟ್ಸ್ ಎಂಬ ಕೃತಿಯಲ್ಲಿ ಇವನ ಕೆಲವು ಕವನಗಳಿವೆ. ಸುಂದರ ಚಿತ್ರಗಳನ್ನು ಸೃಷ್ಟಿಸಬಲ್ಲ ಸಾಮಥ್ರ್ಯ ಮತ್ತು ಉತ್ತಮ ಮಟ್ಟದ ಸೌಂದರ್ಯಕಲ್ಪನೆ ಇವನ ಕವನಗಳಲ್ಲಿ ಕಂಡುಬರುತ್ತದೆ. ಈತ ಕೆಲವು ನಾಟಕಗಳನ್ನೂ ಬರೆದಿದ್ದಾನೆ. ಅವುಗಳಲ್ಲಿ ಫೋನಿಕ್ಸ್ (1923) ಪ್ರಸಿದ್ಧವಿದೆ. 

	ವಿಮರ್ಶೆಯ ಕ್ಷೇತ್ರದಲ್ಲಿ ಈತನ ಥಾಮಸ್ ಹಾರ್ಡಿ (1912), ದಿ ಥಿಯೊರಿ ಆಫ್ ಪೊಯೆಟ್ರಿ (1924), ದಿ ಐಡಿಯ ಆಫ್ ಗ್ರೇಟ್ ಪೊಯೆಟ್ರಿ (1925), ಲಿಬರ್ಟಿ ಆಫ್ ಇಂಟರ್ ಪ್ರಿಟಿಂಗ್ (1930), ಪೊಯೆಟ್ರಿ-ಇಟ್ಸ್ ಮ್ಯೂಸಿಕ್ ಅಂಡ್ ಮೀನಿಂಗ್ ಇವು ಖ್ಯಾತ ಕೃತಿಗಳಾಗಿವೆ. ಈತನ ಒಳ್ಳೆಯ ಗ್ರಂಥವಾದ ಪ್ರಿನ್ಸಿಪಲ್ಸ್ ಆಫ್ ಲಿಟರರಿ ಕ್ರಿಟಿಸಿಸಮ್ ಎಂಬ ಗ್ರಂಥ ಕನ್ನಡಕ್ಕೆ ಅನುವಾದವಾಗಿದೆ.									
(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ